ವಿಲ್ಲಿಂಗ್ಡನ್, ಲಾರ್ಡ್
	1866-1941. ಭಾರತದ ವೈಸ್‍ರಾಯ್ (1931-36). ಇವನ ಮೂಲ ಹೆಸರು ಫ್ರೀಮನ್ ಥಾಮಸ್. ಅನಂತರ ಮಾಕ್ವೀಸ್ ಆಫ್ ವಿಲ್ಲಿಂಗ್ಡನ್ ಎಂದು ಖ್ಯಾತನಾದ. ಈತ 1866 ಸೆಪ್ಟೆಂಬರ್ 12ರಂದು ಸಸೆಕ್ಸ್‍ನ ರಾಟನ್ ಎಂಬಲ್ಲಿ ಜನಿಸಿದ. ಫ್ರೀಮನ್ ಥಾಮಸ್ ಮತ್ತು ಮೆಬೆಲ್ ಬ್ರಾಂಡ್ ಇವನ ಪಾಲಕರು. ಇವರು ಅರ್ಥರ್ ಫ್ರೀಮನ್‍ನ ವಂಶಸ್ಥರಾಗಿದ್ದರು. ಈತ ಈಟನ್, ಟ್ರಿನಿಟಿ ಕಾಲೇಜು ಮತ್ತು ಆಕ್ಸ್‍ಫರ್ಡ್ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡಿದ. ವಿದ್ಯಾಭ್ಯಾಸದ ಅವಧಿಯಯಲ್ಲಿ ಒಳ್ಳೆಯ ಕ್ರೀಡಾಪಟುವಾಗಿದ್ದು, ಅಥ್ಲೆಟಿಕ್ಸ್ ಮತ್ತು ಕ್ರಿಕೆಟ್ ಆಟಗಳಲ್ಲಿ ಸಾಕಷ್ಟು ಹೆಸರು ಗಳಿಸಿದ್ದ. ಕಾಲೇಜು ಮತ್ತು ವಿಶ್ವವಿದ್ಯಾಲಯದ ಕ್ರಿಕೆಟ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದ. ಮಾರಿಯ ಅಡಿಲೈಡ್ ಎಂಬಾಕೆಯನ್ನು ವಿವಾಹವಾದ (1892). ಈ ವಿವಾಹದಿಂದ ವಿಲ್ಲಿಂಗ್ಡನ್ನ್‍ನ ಅಂತಸ್ತು ಹೆಚ್ಚಿತು. ತನ್ನ ಮಾವ ಆಸ್ಟ್ರೇಲಿಯದ ವಿಕ್ಟೋರಿಯ ಪ್ರಾಂತದ ಗೌವರ್ನರ್ ಆಗಿದ್ದಾಗ ಅವನ ಸಹಾಯಕನಾಗಿ(ಎ.ಡಿ.ಸಿ.) ಕಾರ್ಯನಿರ್ವಹಿಸಿದ(1897-1900). ಇಂಗ್ಲೆಂಡಿಗೆ ಹಿಂತಿರುಗಿದ ಮೇಲೆ, ಉದಾರವಾದಿ ಪಕ್ಷದಿಂದ ಪಾರ್ಲಿ ಮೆಂಟಿನ ಸದಸ್ಯನಾಗಿ ಆಯ್ಕೆಯಾದ (1900-10). ಒಳ್ಳೆಯ ಸ್ವಭಾವ, ಸ್ಫುರದ್ರೂಪಿ ಮತ್ತು ಚುರುಕು ಬುದ್ಧಿಯವನೆಂದು ಸಂಸತ್ತಿನಲ್ಲಿ ಜನಪ್ರಿಯನಾಗಿದ್ದ. ಖಜಾನೆಯ ಕಿರಿಯ ಅಧಿಕಾರಿಯಾಗಿ ನೇಮಕಗೊಂಡ (1905). ಅನಂತರದ ದಿನಗಳಲ್ಲಿ ಮೇಲ್ಮನೆಯ ಸದಸ್ಯನಾದ.

	ಮುಂಬೈ ಪ್ರಾಂತದ ಗವರ್ನರ್ ಆಗಿ ನೇಮಕಗೊಂಡ(1913). ಇವನ ನೇರ ನುಡಿಯ ಗುಣ, ಕ್ರಿಯಾಶೀಲತೆ ಮತ್ತು ಕ್ರೀಡಾ ಮನೋಭಾವ ಯಶಸ್ಸಿನ ಮೆಟ್ಟಿಲನ್ನು ಏರಲು ಸಹಾಯವಾಯಿತು. ಒಂದನೆಯ ಮಹಾ ಯುದ್ಧದಲ್ಲಿ ಹಿರಿಯ ಮಗನನ್ನು ಕಳೆದುಕೊಂಡ. ಅನಂತರ ಮದರಾಸು ಪ್ರಾಂತದ ಗವರ್ನರ್ ಆಗಿ ಸೇವೆ ಸಲ್ಲಿಸಿದ(1919-24). ಇಲ್ಲಿಯೂ ಈತ ಜನಪ್ರಿಯನಾದ. ಜೊತೆಗೆ ಭಾರತ ಮತ್ತು ಇಂಗ್ಲೆಂಡ್‍ಗಳೆರಡರಲ್ಲೂ ಆದರ್ಶ ಗವರ್ನರ್ ಎಂಬ ಪ್ರಶಂಸೆಗೆ ಪಾತ್ರನಾದ. ಜಿನೀವ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ(1924). ಚೀನ ದೇಶಕ್ಕೆ ಬಕ್ಸಾರ್ ಯುದ್ಧದ ಪರಿಹಾರ ನಿಧಿಯ ಸಂಬಂಧ ಚರ್ಚಿಸಲು ಹೋಗಿದ್ದ(1926). ಇದೇ ಸಂದರ್ಭದಲ್ಲಿ ಕೆನಡ ದೇಶದ ಗವರ್ನರ್ ಜನರಲ್ ಆಗಿ ನಿಯುಕ್ತನಾದ. ಇವನ ಆಳಿಕೆಯ ಅವಧಿಯಲ್ಲಿ ಇಂಗ್ಲೆಂಡ್ ಮತ್ತು ಕೆನಡಕ್ಕೆ ಹೈಕಮಿಷನರನ್ನು ನೇಮಕ ಮಾಡಲಾಯಿತು. ಈತ ರಾಜನ ಸಂವಿಧಾನಾತ್ಮಕ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ. ಕೆನಡ ಒಕ್ಕೂಟದ ವಜ್ರ ಮಹೋತ್ಸವ ಸಮಾರಂಭವನ್ನು ಇವನ ನೇತೃತ್ವದಲ್ಲಿ ಆಯೋಜಿಸ ಲಾಗಿತ್ತು(1927). ಇದೇ ಸಂದರ್ಭದಲ್ಲಿ ವೇಲ್ಸ್‍ನ ರಾಜಕುಮಾರ ಮತ್ತು ಪ್ರಧಾನಮಂತ್ರಿ ಸ್ಟಾನ್ಲಿ ಬಾಲ್ಡ್‍ವಿನ್ ಭೇಟಿ ನೀಡಿದ್ದ. ಕೆನಡ ಮತ್ತು ನ್ಯೂಪೌಂಡ್‍ಲೆಂಡ್ ನಡುವೆ ಇದ್ದ ಲ್ಯಾಬ್ರಡಾರೋ ಗಡಿ ವಿವಾದವನ್ನು ಬಗೆಹರಿಸಿದ. ಈತ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಭೇಟಿ ನೀಡಿದಾಗ(1927) ಇವನಿಗೆ ಅಮೆರಿಕ ಅಧ್ಯಕ್ಷರಿಂದ ಸರ್ಕಾರಿ ಗೌರವ ದೊರೆಯಿತು. ಕೆನಡದಿಂದ ಹಿಂತಿರುಗಿದ ಮೇಲೆ ಈತ ಭಾರತದ ವೈಸ್‍ರಾಯ್ ಆಗಿ ಆಡಳಿತ ನಡೆಸಿದ (1931-36). ಇವನ ಆಡಳಿತ ಅವಧಿಯಲ್ಲಿ ಹಲವಾರು ಸಮಸ್ಯೆಗಳು  ತಲೆದೋರಿದುವು. ಈತ ಭಾರತಕ್ಕೆ ನೇಮಕಗೊಂಡ ವೈಸ್‍ರಾಯ್‍ಗಳಲ್ಲಿ ಅತ್ಯಂತ ಹಿರಿಯನಾಗಿದ್ದ. ತನ್ನ ಆಡಳಿತ ಅವಧಿಯಲ್ಲಿ ದೇಶವನ್ನು ಬಿಟ್ಟು ಹೊರಕ್ಕೆ ಹೋಗಲಿಲ್ಲ. ಈತ ವಿಮಾನದ ಮೂಲಕ ಭಾರತವನ್ನು ಪರ್ಯಟನೆ ಮಾಡಿದ ಮೊದಲ ವೈಸ್‍ರಾಯ್. ಇವನ ಆಳಿಕೆಯ ಅವಧಿಯಲ್ಲಿ ರಾಷ್ಟ್ರೀಯ ಚಳವಳಿ ತೀವ್ರವಾಗಿತ್ತು. ಭಾರತೀಯ ರೂಪಾಯಿ ಮೌಲ್ಯದ ನಿಯಂತ್ರಣಕ್ಕೆ ಕ್ರಮ ಕೈಗೊಂಡ. ಜಪಾನಿನ ಜೊತೆ ವಾಣಿಜ್ಯ ಒಪ್ಪಂದವನ್ನು ಮಾಡಿಕೊಂಡ. ಈತ ಭಾರತೀಯ ಮತ್ತು ಇಂಗ್ಲಿಷ್ ಸಮಾಜಗಳನ್ನು ವಿಭಜನೆ ಮಾಡುವುದನ್ನು ವಿರೋಧಿಸಿದ. ಭಾರತೀಯ ರಾಜರುಗಳ ಪ್ರೀತಿಗೆ ಪಾತ್ರನಾಗಿದ್ದ. ಗುಡ್‍ವಿಲ್ ನಿಯೋಗದ ನಾಯಕತ್ವವನ್ನು ವಹಿಸಿಕೊಂಡು (1938), ವಾಣಿಜ್ಯ ಪ್ರತಿನಿಧಿಯಾಗಿ ದಕ್ಷಿಣ ಅಮೆರಿಕಕ್ಕೆ ಹೋಗಿದ್ದ(1941). ಇಪ್ಪತ್ತು ವರ್ಷಗಳ ಕಾಲ ಗವರ್ನರ್ ಅಥವಾ ಗವರ್ನರ್ ಜನರಲ್ ಆಗಿ ಪೂರ್ವ ಮತ್ತು ಪಶ್ಚಿಮಗಳಲ್ಲಿ ಸೇವೆ ಸಲ್ಲಿಸಿದ.

	ಇವನಿಗೆ ಅನೇಕ ಗೌರವಗಳು ದೊರೆತವು. ಪ್ರಾಮಾಣಿಕನೂ ರಾಷ್ಟ್ರಪ್ರೇಮಿಯೂ ಆಗಿದ್ದ ಈತ 1941 ಆಗಸ್ಟ್ 12ರಂದು ನಿಧನನಾದ.						
				(ಎನ್.ಎಮ್.ಎಸ್.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ